kannadasahityahistoryimage

ನಮ್ಮ ಪರಿಷತ್ತು

ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ ೫-೫-೧೯೧೫ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು ೧೯೧೪ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ಕರ್ಣಾಟಕ ಸಾಹಿತ್ಯ ಪರಿಷತ್ತೇ ಇಂದು ‘ಕನ್ನಡ ಸಾಹಿತ್ಯ ಪರಿಷತ್ತು’ಆಗಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯಾದ್ಯಂತ ಅಷ್ಟೇಕೆ ಹೊರನಾಡಿನಲ್ಲೂ ತನ್ನ ಬಿಳಿಲುಗಳನ್ನು ಬಿಟ್ಟಿದೆ.

ಬೃಹತ್ ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ,ಬಿ.ಎಂ.ಶ್ರೀ ಅಚ್ಚುಕೂಟ, ಸುವರ್ಣ ಮಹೋತ್ಸವ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಟ್ಟಡಗಳಿದ್ದು, ಇಲ್ಲಿ ಕನ್ನಡದ ಕೈಂಕರ್ಯ ನಿರಂತರವಾಗಿ ಸಾಗಿದೆ. ಶತಮಾನೋತ್ಸವ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ೧೯೪೦ರಲ್ಲಿ ರಜತ ಮಹೋತ್ಸವವನ್ನೂ, ೧೯೭೩ರಲ್ಲಿ ಸುವರ್ಣ ಮಹೋತ್ಸವವನ್ನೂ, ೧೯೭೭ರಲ್ಲಿ ವಜ್ರ ಮಹೋತ್ಸವವನ್ನೂ, ೧೯೯೧ರಲ್ಲಿ ಅಮೃತ ಮಹೋತ್ಸವವನ್ನೂ, ೨೦೧೫ರ ವರ್ಷದಲ್ಲಿ ಶತಮಾನೋತ್ಸವವನ್ನೂ ಪರಿಷತ್ತು ಆಚರಿಸಿದೆ.